ಮೊರಸುನಾಡು : ಹಿನ್ನೆಲೆ


ಸ. ರಘುನಾಥರ ಹೊಸ ಕೃತಿ ಮೊರಸುನಾಡು ಹಿನ್ನಲೆ ಕುರಿತು ಅವರ ಬರಹ

ಮೊರಸುನಾಡು’ಗೆ ಒಂದು ಹಿನ್ನೆಲೆಯಿದೆ. ತೆಲುಗು ಸಾಹಿತಿ, ತೆಲುಗು ನುಡಿ ಹೋರಾಟಗಾರ ಶ್ರೀ ಸ.ವೆಂ.ರಮೇಶರ ಪರಿಚಯವಾಗಿ, ಅದು ಸ್ನೇಹಕ್ಕೆ ತಿರುಗಿತು. ಒಮ್ಮೆ ಭೇಟಿಯಾದಾಗ ಅವರು ಮೊರಸುನಾಡಿನ ಬಗ್ಗೆ ಹೇಳಿ, ಚರ್ಚೆಗೆ ಕುಳಿತರು. ಚರ್ಚೆಯ ಫಲವಾಗಿ ಇಬ್ಬರ ಸಂಪಾದಕತ್ವದಲ್ಲಿ ‘ಮೊರಸುನಾಡು ಕಥಲು’ ಪ್ರಕಟವಾಯಿತು. ಇದರಲ್ಲಿ ನಮ್ಮ ಸಂಪಾದನಾನುಕೂಲಕ್ಕೆ ಸ್ಪಂದಿಸಿದ ಕೋಲಾರ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರದ ಕೆಲವು ಕತೆಗಾರರ ಕನ್ನಡ ಕಥೆಗಳನ್ನು ತೆಲುಗಿಗೆ ಅನುವಾದಿಸಿಕೊಂಡು, ತಮಿಳುನಾಡಿನ ಹೊಸೂರು, ಕೃಷ್ಣಗಿರಿಯ ತೆಲುಗು ಕತೆಗಾರ, ಆಂಧ್ರದ ಮದನಪಲ್ಲಿ, ಪಲಮನೇರು, ಚಿತ್ತೂರು ಪ್ರದೇಶಗಳ ತೆಲುಗು ಕಥೆಗಳು ಸೇರಿ ಮೊರಸುನಾಡು ಕಥಲು ಸಂಕಲನಗೊಂಡಿತು. ಆಗ ಸ.ವೆಂ.ರಮೇಶರು ತೆಲುಗು ಪದ್ಯವೊಂದನ್ನು ಕೊಟ್ಟುದಲ್ಲದೆ, ಮೊರಸುನಾಡಿನ ರೇಖಾಚಿತ್ರವನ್ನು ನೀಡಿದರು. ಈ ಎರಡನ್ನೂ ಮೊರಸುನಾಡು ಕಥಲು ಪುಸ್ತಕದಲ್ಲಿ ಬಳಸಿಕೊಳ್ಳಲಾಯಿತು. ಸಂಕಲನ ತೆಲುಗು ಓದುಗ, ವಿಮರ್ಶಕರ ಗಮನ ಸೆಳೆಯಿತು. ಇದೇ ಸ್ಫೂರ್ತಿಯಾಗಿ ಇಲ್ಲಿನ ಕನ್ನಡ ಕಥೆಗಳೊಂದಿಗೆ, ಮೊರಸುನಾಡು ತೆಲುಗು ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿ ‘ಮೊರಸುನಾಡು ಕಥೆಗಳು’ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟವಾಯಿತು.


ಈ ಹಿನ್ನೆಲೆಯಲ್ಲಿ ನನ್ನಲ್ಲಿ ಈ ಪ್ರದೇಶಗಳಲ್ಲಿನ ಜಾನಪದ ಕಥೆ, ಹಾಡುಗಳತ್ತ ಒಲವು, ಆಸಕ್ತಿ ಹುಟ್ಟಿತು. ಇದಕ್ಕೂ ಮೊದಲು ಕೋಲಾರ ಜಿಲ್ಲೆಯ ತೆಲುಗು ಜಾನಪದ ಗೀತೆಗಳನ್ನು ಸಂಗ್ರಹಿಸಿ ‘ಗಿಲಿಕೆ’ ಹೆಸರಿನಲ್ಲಿ ಮೂಲವನ್ನು ಕನ್ನಡದಲ್ಲಿ ಲಿಪಿಸಿ, ಅನುವಾದಿಸಿ, ಶಾಲಾ ಮಕ್ಕಳು ಇದ್ದಲು, ಎಲೆ ರಸ ಬಳಸಿ ಬರೆದ ಚಿತ್ರಗಳನ್ನು ಅವರು ಬರೆದಂತೆಯೇ ಪ್ರಕಟಿಸಿದೆ. ಇದಕ್ಕೆ ಎನ್.ಸಿ.ಇ.ಆರ್.ಟಿ.ಯಲ್ಲಿ ನಿರ್ದೇಶಕರಾಗಿದ್ದ ಶ್ರೀ ಟಿ.ಎಂ.ಕುಮಾರ್ ಸಂಪೂರ್ಣ ಸಹಕಾರ ನೀಡಿದರು. ನಂತರ ಅವಿಭಜಿತ ಕೋಲಾರಜಿಲ್ಲೆಯ ತೆಲುಗು ಜಾನಪದ ಗೀತೆ, ಗಾದೆಗಳನ್ನು ಸಂಗ್ರಹಿಸಿ ‘ಎರ್ರರ್ಯಾಗಿಡಿ’ (ಕೆಂಪಮಣ್ಣು) ಹೆಸರಿನಲ್ಲಿ ಪ್ರಕಟಿಸಿದೆ. ಇದನ್ನು ಆಂಧ್ರದ ಕುಪ್ಪಂನಲ್ಲಿರುವ ದ್ರಾವಿಡ ವಿಶ್ವವಿದ್ಯಾಲಯ ಪ್ರಕಟಿಸಿತು. ಇದಕ್ಕೆ ವಿಶೇಷವಾಗಿ ನೆರವಾದವರು ಶಾಸನತಜ್ಞ ಡಾ. ಆರ್.ಶೇಷಶಾಸ್ತ್ರಿಯವರು.

ಮೊರಸುನಾಡು ಕಥಲು ಈ ಪ್ರದೇಶದ ಜಾನಪದ ಗೀತೆಗಳ ಸಂಗ್ರಹಕ್ಕೆ ಪ್ರೇರಣೆಯಾಗಿ ‘ಅಲಸಂದಿ ಪೂಸಿಂದಿ’ (ಮೊರಸುನಾಡು ಪಾಟಲು – 1. ಅಲಸಂದೆ ಹೂ ಬಿಟ್ಟಿತು), ಕೆಂ.ಮುನಿರಾಜು ಸಂಗ್ರಹಿಸಿದ  ‘ಚಿಲಕಲು ವಾಲಿನ ಚಿಕ್ಕುಡು ಚೆಟ್ಟು’ (ಮೊರಸುನಾಡು ಪಾಟಲು -2) ಕೃತಿಗಳನ್ನು ಕೃಷ್ಣಗಿರಿ ಜಿಲ್ಲಾ ತೆಲುಗು ರಚಯಿತುಲ ಸಂಘಂ ಪ್ರಕಟಿಸಿತು. ಆಗ ಈ ಪ್ರದೇಶದಲ್ಲಿ ಸಿಕ್ಕಿದ ನಾಲ್ಕು ಕನ್ನಡ ಪದಗಳನ್ನು ತೆಲುಗಿಗೆ ಅನುವಾದಿಸಿ ಅದರಲ್ಲಿ ಸೇರಿಸಿದೆ.

ಅಸ್ತಿತ್ವ ಕಾಪಾಡಿಕೊಳ್ಳುವ ಸಂಬಂಧಗಳಲ್ಲಿ ಹೂಡಿದ ಯುದ್ಧದಲ್ಲಿ ಸಿಕ್ಕಿ ಅಸ್ತಿತ್ವ ಕಳಕೊಂಡವುಗಳಲ್ಲಿ ಭೌಗೋಳಿಕ ಮೊರಸುನಾಡು ಪ್ರದೇಶವೂ ಒಂದು. ಈಗ ಮೊರಸುನಾಡೆಂಬುವುದು ಕಾಲ್ಪನಿಕ ಗಡಿ ರೇಖೆ. ಇದು ತ್ರಿಭಾಷಾ (ಕನ್ನಡ, ತೆಲುಗು, ತಮಿಳು) ಸಂಗಮವಾದುದು. ಅಂದರೆ ಕರ್ನಾಟಕ, ಆಂಧ್ರ, ತಮಿಳುನಾಡುಗಳ ಒಂದು ವಿಸ್ತಾರ ಅಂಚಿನ ಭೂ ಪ್ರದೇಶ. ಆದರೆ ಕನ್ನಡ ಮತ್ತು ತೆಲುಗು ಇಲ್ಲಿನ ಪ್ರಧಾನ ಭಾಷೆಗಳು. ಮೊರಸುನಾಡಿಗೆ ಸೇರಿದ ತಮಿಳುನಾಡು ಭಾಗಗಳಲ್ಲಿಯೂ ಬಹುಸಂಖ್ಯಾತರು ಕನ್ನಡಿಗ-ತೆಲುಗರೇ. ಮೊರಸುನಾಡಿಗೆ ಮೊದಲು ಅದರದ್ದೇ ಆದ ರಾಜಕೀಯ-ಭೌಗೋಳಿಕ ಅಸ್ತಿತ್ವವಿತ್ತು. (ಮುಂದೆ ಓದಲಿರುವ ಪದ್ಯದಲ್ಲಿ ಪ್ರಖ್ಯಾತ ತೆಲುಗು ಕವಿ ಶ್ರೀನಾಥನ ಬ್ರಹ್ಮ ಈ ಮೊರಸುರಾಜ್ಯವನೆಂತು ಸೃಷ್ಟಿಸಿದನಕಟಾ ಎಂಬ ಮಾತುಗಳನ್ನು ಗಮನಿಸಿ) ಈಗ ಆ ರಾಜಕೀಯ ನಕಾಸೆಯ ಭೌಗೋಳಿಕ ಅಸ್ತಿತ್ವವಿಲ್ಲದಿದ್ದರೂ ಕೊಂಚವಾದರೂ ಉಳಿದಿರುವ ಅಗೋಚರ ಸಾಂಸ್ಕೃತಿಕ, ಭಾಷಿಕ ಹಾಗೂ ಬದುಕಿನ ಸಾಮಾನ್ಯತೆಯ ಅಸ್ಮಿತೆಯೂ, ಅಸ್ತಿತ್ವವೂ ಒಂದಿದೆ.

ಮೊರಸು’ ಎಂಬುದು ಮೊದಲಿಗೆ ಕಾಣಿಸಿಕೊಳ್ಳುವುದು 15ನೇ ಶತಮಾನದಲ್ಲಿ. ಬುಕ್ಕರಾಯರ ಕಾಲದಲ್ಲಿ ದೇವಳರಾಜನೆಂಬ ಕವಿಯದೆಂದು ಹೇಳಲಾದ ಪದ್ಯವೊಂದರಲ್ಲಿ. ಒಕ್ಕಲಿಗರ ಶಾಖೆಗಳನ್ನು ಕುರಿತ ಪದ್ಯವಿದು.

       ಬೆಳೆ(ವಂಶ)ಯಾನ್ವಯದಿ ಹದಿನಾಲ್ಕು ಶಾಖೆಗಳು

       ಚೊಕ್ಕದಿ ವಿವರಿಸುವೆ ಸತ್ಯವರಸಿ

       ಮೋಟಾಟಿ ವೆಲ್ನಾಟಿ ಮೊರಸೆಂಬಯೋಧ್ಯ

       ವಂಶ ಪೊಂಗಲಿನಾಟಿ ಪಾಕನಾಟಿ

       ಭೂಮಂಚಿ ಕುರುಚೇಟಿ ಮುನ್ನೂಟಿ ದೇಸಟಿ

       ಒನರ ಗಂಡಿಯಕೋಟ ವೋರುಗಂಟಿ

       ಎಂಬ ಪ್ರಸಿದ್ಧ ಆಂಧ್ರವನಸ್ಥಲದಿ

       ಗೌರವಾಧಿಷ್ಟಿತ ಒಕ್ಕಲ ಕುಲವು

 

       ವಂಶ ಹದಿನಾಲಕ್ಕು ಕುಲಗಳೆಂಬುವು ಜಗದಿ

       ಪರಂಪರೆಯಿಂ ಪ್ರಕಾಶಿಸುವ ನಡಿವೆ

       ನಿವರ ಉಪಜಾತಿಗಳಿಹವು ವಿಧಗಳಾಗಿ 

       ಭುಜಬಲಾಟೋಪ ಚಿಕ್ಕ ಬುಕ್ಕಭೂಪ

 

ಕವಿಸಾರ್ವಭೌಮನೆಂದು ತೆಲುಗರಿಂದ ಹೊಗಳಲ್ಪಡುವ ಕವಿ ಶ್ರೀನಾಥ ತನ್ನೊಂದು ಚಾಟುಪದ್ಯದಲ್ಲಿ ಮೊರಸುನಾಡಿಗರನ್ನು ಕುರಿತು ಹೇಳಿರುವುದನ್ನು ಇಲ್ಲಿ ಗಮನಿಸಬೇಕು. ಶ್ರೀನಾಥ ತನ್ನ ತವರಾದ ನೆಲ್ಲೂರನ್ನು ಬಿಟ್ಟು ಮುಕ್ತವಾಗಿ ಇನ್ನೊಂದು ಸ್ಥಳವನ್ನು ಮತ್ತೊಂದು ಜನಾಂಗವನ್ನು ಪ್ರಶಂಸಿದ್ದಿಲ್ಲ. ಹಾಗಾಗಿ ಇದರಲ್ಲಿ ಕೊಂಚ ವ್ಯಂಗ್ಯ ಬೆರೆತಿದೆ.

       ಸೊಟ್ಟು ರುಮಾಲುಗಳ ನಡುವು ಬಾಗಿದ ಕತ್ತಿಗಳು ಮಲಿನ ವಸ್ತ್ರಗಳ

       ಹಿಟ್ಟಿನ ಮುದ್ದೆಗಳ ಸೊಪ್ಪುಸೊದೆಗಳ ಬಹು ಪಚ್ಚಡಿಗಳ

       ದಿಟ್ಟಿ ದಿಗಿಲ ಓರೆನೋಟಗಳ ಧೈರ್ಯ ತಪ್ಪಿದ ದೇಸಿನುಡಿಗಳ

       ರಂಕಿನ ಬ್ರಹ್ಮ ಈ ಮೊರಸುರಾಜ್ಯವನೆಂತು ಸೃಷ್ಟಿಸಿದನಕಟಾ

 

ಈ ಕಟಕಿ ನುಡಿಗಳನ್ನು ಬಿಟ್ಟರೆ 9ನೇ ಶತಮಾನದ ಶಾಸನವೊಂದರಲ್ಲಿ ಮೊರಸು ಎಂಬ ಪದ ಕಂಡುಬರುವುದೆಂದು ಸಂಶೋಧಕರು ಹೇಳುತ್ತಾರೆ. ಗಂಗ ಹಾಗೂ ರಾಷ್ಟ್ರಕೂಟ ರಾಜವಂಶಗಳ ಮಧ್ಯೆ ನಡೆದ ಹೋರಾಟಗಳಿಗೆ ಈ ತಾರತಮ್ಯಗಳು ಮೂಲ ಕಾರಣವಾಗಿತ್ತೆಂದು ಹೇಳಲಾಗಿದೆ. ಈ ಅವಧಿಯಲ್ಲಿ ಪ್ರಾಕೃತ ಶಾಸನಗಳಲ್ಲಿ ಒಂದು ಕಡೆ ಇದಕ್ಕೆ ‘ಸಣ್ಣನಾಡು’ ಎಂಬ ಹೆಸರಿದ್ದುದಾಗಿ ತಿಳಿಯುತ್ತದೆ. ಚೋಳರು ಇದನ್ನು ಸೇರಿಸಿಕೊಂಡ ಭೂಪ್ರದೇಶವನ್ನು ‘ಚೋಳಮಂಡಲ’ ಎಂದು ಕರೆದರು. ನೊಳಂಬರ ಕಾಲದಲ್ಲಿ ಇದಕ್ಕೆ ‘ನೊಳಂಬವಾಡಿ’ ಎಂದು ಹೆಸರಾಯಿತು. ಮೊರಸುನಾಡು ಎಂದಾದುದು 9ನೇ ಶತಮಾನದಲ್ಲಿ. (ನೋ. ಸ.ವೆಂ.ರಮೇಶ್, ಮೊರಸುನಾಡು ಕಥಲು, ಮುನ್ನುಡಿ- ‘ಮೂರು ಹೋಳಾದ ಒಂದು ಪ್ರದೇಶದ ಬದುಕುಗಳು’). ಮುಂದಿನ ಸಮಾಜೋ ರಾಜಕೀಯ ಸಂಕ್ಷೋಭೆ ಭಾಷಾವಾರು ಪ್ರಾಂತ್ಯ ವಿಂಗಡಣೆ.

ಮೊರಸುನಾಡು ಕುರಿತ ಶಾಸನವನ್ನು ಶ್ರೀ ದೇವರಕೊಂಡಾರೆಡ್ಡಿಯವರು ಅನ್ವೇಷಿಸಿರುವುದಾಗಿ ತಿಳಿಯಿತಾದರು ಅದರ ವಿವರ ನನಗೆ ಲಭ್ಯವಾಗದಿರುವ ಬಗ್ಗೆ ವಿಷಾದವಿದೆ.

ಮೊರಸುನಾಡು: ಮೊರಸುನಾಡು ಇಂದಿನ ಕರ್ನಾಟಕ, ಆಂಧ್ರ, ತಮಿಳುನಾಡುಗಳಲ್ಲಿ ಹರಿದು ಹಂಚಿಹೋಗಿದೆ. ಕರ್ನಾಟಕದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ಆಂಧ್ರದ ಕುಪ್ಪಂ, ಪಲಮನೇರು, ಪುಂಗನೂರು, ಹಿಂದೂಪುರಂ, ಮದನಪಲ್ಲೆ ತಾಲುಕುಗಳ ಹೆಚ್ಚಿನ ಭಾಗಗಳು, ತಮಿಳುನಾಡಿನ ಹೊಸೂರು, ಡಂಕಣಿಕೋಟೆ, ತಾಲೂಕುಗಳು ಹಾಗು ವೇಪನಪಲ್ಲಿ ಕೂಡಿ ಆದುದು ಮೊರಸುನಾಡು. ಮೊರಸುನಾಡಿನ ಅಧಿಕ ಭೂಭಾಗ ಕನ್ನಡನಾಡಿನದೇ. ಆದರೂ ಇದು ಭಾಷಿಕವಾಗಿ ತೆಲುಗು ಪ್ರಮುಖ ಭಾಷೆಯಾಗುಳ್ಳ ಭೂಪ್ರದೇಶ.

ಈ ಮೂರು ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಹರಡಿದ ಸಾಮಾನ್ಯರ ಜನಜೀವನ ಬಹುಪಾಲು ಒಂದೇ ರೀತಿಯ ನೋವು, ನಲಿವು, ಕಷ್ಟ ಕಾರ್ಪಣ್ಯಗಳನ್ನು ಒಳಗೊಂಡಿದ್ದು, ಇವು ಭಾಷಿಕವಾಗಿಯೂ ಬಹುಭಾಷಾ ಪ್ರದೇಶಗಳೇ. ಭೌಗೋಳಿಕವಾಗಿ ಪರಿಸರದಲ್ಲಿಯೂ ಇರುವ ವ್ಯತ್ಯಾಸ ಮಹತ್ವದಲ್ಲ. ಒಣನೆಲ, ಕಡಿಮೆ ವರ್ಷಪಾತ, ನೀರಿನ ಬವಣೆ, ಬಡತನ ಇಲ್ಲಿನ ಸಾಮಾನ್ಯ ಸಂಗತಿಗಳು. ಸ್ವಾತಂತ್ರ್ಯಾನಂತರ ಇಷ್ಟು ಕಾಲದ ಬಳಿಕವೂ ಅಭಿವೃದ್ಧಿಯಲ್ಲಿ ನಗರಕೇಂದ್ರಿತ, ಪಕ್ಷಾಧಾರಿತ ರಾಜಕಾರಣ ಮೂಲವಾಗಿ ಈ ಪ್ರದೇಶಗಳ ಬಹುಭಾಗಗಳು ಹಿಂದುಳಿದ ಗಡಿ ಪ್ರದೇಶಗಳಾಗಿವೆ. ಕುಪ್ಪಂ ಒಂದು ಅಪವಾದವಿರಬಹುದು. ಈ ಅಪರಾಧವೂ ರಾಜಕೀಯ ನಿಲುವಿನದ್ದಾಗಿದೆ. ಹೀಗಾಗಿ ಇಲ್ಲಿನ ಬದುಕುಗಳಲ್ಲಿನ ಸಾರೂಪ್ಯ, ಸಾಮ್ಯತೆ ಸಹಜವಾದುದು.


ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು