ಪುಸ್ತಕದ ಮಾತು - ಕಂದಿಲು ಕಾದಂಬರಿ


ಸೋಮು ರೆಡ್ಡಿಯವರ ಕಂದಿಲು ಕಾದಂಬರಿಯ ಬಗ್ಗೆ ಪ್ರಶಾಂತ ಭಟ್ ಮತ್ತು ಪ್ರಿಯಾ ಭಟ್ ಅವರ ಅಭಿಪ್ರಾಯ

ಉತ್ತರ ಕರ್ನಾಟಕದ ಭಾಷೆಯ ಗಡಸು ಭಾಷೆಯ ಹೃದಯಂಗಮ ಕಥೆ ಇದು.

ಕಂದೀಲು ಹಿಡಿಯುವವನ‌ ಮದುವೆಯಾಗಿ ಸುಂದರ ಬದುಕಿನ ಕನಸು ಹೊತ್ತು ಬಂದ ಕುಸುಮಿಗೆ ತನ್ನ ಹೊಟ್ಟೆಯಲ್ಲಿ ಕೂಸಿಲ್ಲ ಎಂಬ ಕೊರಗು. 

ಬದುಕಿನ ಅನಿವಾರ್ಯಗಳು ಆಕೆಯನ್ನು ಹೊಟ್ಟೆಪಾಡಿಗಾಗಿ ಸೆರಗು ಹಾಸುವಂತೆ ಮಾಡುತ್ತದೆ. ಮುಂಬಯಿ ಶಹರಿಗೂ ದಂಧೆಗಾಗಿ ಹೋಗುವ ಆಕೆಗೆ ಅಲ್ಲಿ ನರಕ ದರ್ಶನವಾಗುತ್ತದೆ‌. ಪೋಲಿಸನೊಬ್ಬನ ಸಹಾಯದಿಂದ ಬದುಕು ಕೊಂಚ ಹಳಿಗೆ ಬರುತ್ತದೆ.ಆಕೆಗೂ ಮಗುವಾಗುತ್ತದೆ. ಆಕೆಯ ಒಡಲ ಕುಡಿಗೆ ವಂಶದ ಕಸುಬಾದ ಕಂದೀಲು ಹಿಡಿಯುವುದು ದೊರೆಯುತ್ತದಾ? ಅವಳ ಈ ಹೋರಾಟಕ್ಕೆ ಗ್ರಾಮಸ್ಥರ ವಿರೋಧ ಏಕೆ? ಇವಕ್ಕೆ ನೀವು ಪುಸ್ತಕ ಓದಬೇಕು.


ಮೊದಲನೆಯದಾಗಿ ನನ್ನ ಗಮನ ಸೆಳೆದದ್ದು ಭಾಷೆ.
ಅಪ್ಪಟ ಗ್ರಾಮ್ಯ ಭಾಷೆಯ ಸೊಗಸು.

ಎರಡನೆಯದು ಕೃತಕವೆನಿಸದ ವಾತಾವರಣ. ಸಾಮಾನ್ಯವಾಗಿ ಪಾತ್ರಗಳಿಗೆ ಸಾಮಾಜಿಕ ನ್ಯಾಯ ಒದಗಿಸಬೇಕು ಅಂತ ಲೇಖಕರು ಎಲ್ಲೋ ಒಂದು ಕಡೆ ಸಣ್ಣ ಹೊಂದಾಣಿಕೆ ಮಾಡಿ ಕಥೆ ಸಹಜತೆ ಕೆಡಿಸುತ್ತಾರೆ. ಇಲ್ಲಿ ಅದಾಗಿಲ್ಲ. ಅವಳ ಬದುಕು ದುರಂತ ಎಂದು ಅನಿಸಬಹುದು ಆದರೆ ಅದರ ಹೊರತು ಬೇರಾವ ದಾರಿಯೂ ಅವಳಲ್ಲಿರಲಿಲ್ಲ ಎಂಬುದು ವಾಸ್ತವ ಅಲ್ಲವೇ?
ಸೋಮು ರೆಡ್ಡಿಯವರು ಈ ಕಾದಂಬರಿಯ ಬಳಸಿದ ನಿರೂಪಣಾ ಶೈಲಿಯೂ ವಿಭಿನ್ನವಾಗಿದೆ.

ಪ್ರಶಾಂತ ಭಟ್ ಮಂಗಳೂರು


ಲೇಖಕರಾದ ಸೋಮು ರೆಡ್ಡಿಯವರ ಕೃತಿಗಳನ್ನು ಇದೇ ಮೊದಲ ಬಾರಿಗೆ ಎತ್ತಿಕೊಂಡಿದ್ದು.  "ಕಂದೀಲು" ಕಾದಂಬರಿ  ಓದಿಸಿಕೊಳ್ಳುವುದಷ್ಟೇ ಅಲ್ಲ. ಸ್ವಲ್ಪ ಗಾಢವಾಗಿಯೇ ಮನಸು ಕಲಕುತ್ತದೆ. ಈ ಕಾದಂಬರಿ ಯ ವಸ್ತು ಹಳೆಯದೇ. ಬಯಲಸೀಮೆಯ ಹಳ್ಳಿಬದುಕಿನ ದಟ್ಟ ಅನುಭವ ಕಾದಂಬರಿ ಮೊದಲ ಅಧ್ಯಾಯದಿಂದಲೇ ಶುರುವಾಗುತ್ತದೆ. ವಾಡೆ ಅಂದ್ಕೂಡ್ಲೆ ಅದೊಂದು ಶತಃಮಾನದ ಇತಿಹಾಸದ ಮನೆತನವನ್ನು ಮತ್ತು ಹಳ್ಳಿಯ ಬದುಕಿನ ಇತಿಹಾಸವನ್ನೇ ಕಟ್ಟಿಕೊಡುವ ಚಿತ್ರಣ. ಕಾದಂಬರಿಕಾರರು ಕುಸುಮಿಯ ಕತೆಯನ್ನು ಹೇಳುತ್ತ ಹೇಳುತ್ತ ಇಡೀ ಹಳ್ಳಿ ಬದುಕಿನ ಕತೆಯನ್ನೇ ತೆರೆದಿಡುತ್ತ ಸಾಗುತ್ತಾರೆ. ಕತೆ ಪ್ರತಿ ಹಂತದಲ್ಲೂ ಕರುಳು ಚುರ್ ಅನ್ನುವಂತ ಆಘಾತವನ್ನು ಅನುಭವಿಸುವಂತೆ ಮಾಡುತ್ತದೆ. ಕಂದೀಲು ರಂಗಪ್ಪನ ಸಾವು ಮಾತ್ರ ಕತೆಯ ಪ್ರಾಣ ಭಾಗ. ಅವನನ್ನು ಕೊಂದಿದ್ದು ಯಾಕೆಂಬುದು ಕೊನೆಗೂ ಬಗೆ ಹರೆಯದ ರಹಸ್ಯ. ನಾಗನ ನಾಪತ್ತೆ,ಅವನೇ ಕೊಂದಿದ್ದಾದರೂ ಯಾಕೆ?  ಹೀಗೆ ಪ್ರಶ್ನೆ ಇರುವಂತೆಯೇ ಕುಸುಮಿಯ ಕತೆ ತಿರುವಿನಲ್ಲಿ ಅದೆಲ್ಲ ಕಳೆದೇ ಹೋಗುತ್ತದೆ.  ಬದಲಾಗುವ ಅನಿವಾರ್ಯತೆ ಗಳಿಗೆ ಬಲಿಯಾಗುವ ಕುಸುಮಳ ಬದುಕಿನ ಪದರಪದರಗಳನ್ನು ಅತ್ಯಂತ ನೈಜವಾಗಿ ಸರಳವಾಗಿ ಹೇಳುತ್ತ ಹೋಗುತ್ತಾರೆ. 

ಗರತಿಯಾಗಿದ್ದ ಕುಸುಮ ವೇಶ್ಯೆಯಾಗಿ ಬದಲಾಗುವ ಹಂತಗಳು, ಒಮ್ಮೆಯೂ ಅವಳ ಪರಿಸ್ಥಿತಿಯನ್ನಲ್ಲದೇ ಅವಳನ್ನು ದೂರದ  ಲೇಖಕರ ಬದ್ಧತೆ, ಇಡೀ ಊರಿಗೆ ಊರೇ ಬಳಸಿಕೊಳ್ಳುವ ಕುಸುಮಿಯ ಅಸಹಾಯಕತೆ, ಸೂಜಿಯ ಗೆಳೆತನ, ಹಣ ಮಾಡುವ ಆಮಿಷಕ್ಕೊಳ್ಗಾಗಿ ಮುಂಬೈಗೆ ಸಾಗುವ ಕುಸುಮಿ ಅಲ್ಲಿಯ ಬದುಕಿನ ಘೋರತೆ ಎಲ್ಲವನ್ನೂ ಬದುಕಿನ ಭಾಗವೆಂಬಂತೆ ನಡೆದುಬಿಡುವ ಕುಸುಮಿ ಕಾಡದಿರಳು..ಇದ್ದಕ್ಕಿದ್ದಂತೆ ಮಾಯವಾಗುವ ಸೂಜಿ ಕೂಡ‌ ಅನಿಶ್ಚಿತವಾದ ಬದುಕಿನ ಮುಖವೇ. 

  ಹೇಳಲೇಬೇಕಾಗಿದ್ದೆಂದರೆ ಪ್ರತಿಯೊಂದು ಪಾತ್ರ ಗಳಿಗೂ ವಾಸ್ತವವಿದೆ‌. ಮತ್ತು ಆ ವಾಸ್ತವ ಮನುಷ್ಯನ‌ ಮಿತಿ ಕೂಡ. ಶ್ರೀಪಾದನಲ್ಲಿ ಅದು ತುಂಬ ಸ್ಪಷ್ಟ ಗೋಚರವಾದರು ಎಲ್ಲ ಪಾತ್ರಗಳು ಅವರವರ ಅಗತ್ಯ ಮತ್ತು ಮಿತಿಯಲ್ಲೇ ಕತೆಗೆ ಪ್ರವೇಶಿಸಿ ತನ್ನ ಕೆಲಸ ಮುಗಿಸಿ ನಡೆದುಬಿಡುತ್ತವೆ. ಕತೆ  ತಣ್ಣನೆಯ ಹಿಮದಂತೆ ಸಮಾಜದ ಕ್ರೌರ್ಯವನ್ನು ತೆರೆದಿಡುತ್ತದೆ.  ಅಲ್ಲಲ್ಲಿ ಕಂದೀಲಿನ ಬೆಳಕು ಹಚ್ಚುವವರಿದ್ದರೂ ಅದು ಮಬ್ಬು ಮಬ್ಬು. 

ಕುಸುಮಿಯ  ತಾಯ್ತನದ ಹಂಬಲದಿಂದಲೇ ಶುರುವಾಗುವ ಕತೆ ಒಂದು ಹಂತದಲ್ಲಿ ಮಗ ಹುಟ್ಟಿದರೆ ಕಂದೀಲು ಹಿಡಿಯುತ್ತಾನೆ ಮಗಳು ಹುಟ್ಟಿದರೆ ದಂಧೆಗೆ ಸೇರಿಸುತ್ತೇನೆ ಎನ್ನುವಲ್ಲಿ ಕುಸುಮಿ ಕೂಡ ಎಲ್ಲೋ ಕ್ಷಣ ಮಾತ್ರದಲ್ಲಿ ನಮ್ಮೆದೆಗೇ ಚೂರಿ ಇರಿದಂತೆ ಅನ್ನಿಸಿಬಿಡುತ್ತದೆ. ಹೌದು ಈ ಮಾತಿನ ಬಗೆಗೆ ನನಗಂತೂ ಪ್ರಶ್ನೆಯಿದೆ. ತಾಯಿಯಾಗಿ ತನ್ನನ್ನು ತಾನು ವೇಶ್ಯೆಯಾಗಿಸಿಕೊಳ್ಳುವಲ್ಲಿ ಅಂತದ್ದೇನು ಉಮೇದಿಯಿರದೇ ಬದುಕಿನ ಅನಿವಾರ್ಯತೆ ಗೆ ಬಿದ್ದ ಕುಸುಮಿ ಈ ನರಕದಿಂದ ತನ್ನ ತಾನು ಬಿಡುಗಡೆಗೊಳಿಸಿಕೊಳ್ಳಲು ಒಮ್ಮೊಮ್ಮೆಯಾದರೂ ಹೆಣಗುವ ಕುಸುಮಿಯ ಮನಸಲ್ಲಿ ಆ ಮಾತನ್ನು ಹೇಳಿಸಿದ್ದಾದರೂ ಯಾಕೆ ಲೇಖಕರು ಅಂತ ನನಗೆ ತುಂಬ ಅನ್ನಿಸಿತು. ಮಗ  ಊರಿಂದ ದೂರ ಹೋಗಿ ದುಡಿದು ಸಾಕುತ್ತೇನೆ ಅನ್ನುವ ಕೊನೆಯ ಮಾತುಗಳಿಗೂ ಅರ್ಥ ಇದೆ. ಅದು ಸಾಧ್ಯವಾಗದಿರುವುದು ಸಂದರ್ಭ. ಆದರೆ ತಾಯಿಯನ್ನು ತಾನು ನೋಡಿಕೊಳ್ಳುವ ಮಾತನಾಡುವುದು ಪಾತ್ರದ ಘನತೆ.  ಕೊನೆಯಲ್ಲಿ ಕೂಡ ಮಗ ಅವಳೆದೆಯ ಮೇಲೆ ತಲೆಯಿಡುವುದೊಂದು ಚಂದದ ಉಪ ಸಂಹಾರ.

ಬರೆಯುತ್ತ ಹೋದರೆ ಬಹಳಷ್ಟು ಕಾಡುವ  ವಿಚಾರಗಳು. ಅದಕ್ಕಿಂತ ಓದುವುದೇ ಉತ್ತಮ.

ಪ್ರಿಯಾ ಭಟ್

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು