ಪುಸ್ತಕ ಪರಿಚಯ - ಮನುಷ್ಯ ಪ್ರೀತಿಗೆ ಹಂಬಲಿಸುವ ಸಶಕ್ತ ಗಜಲ್‍ಗಳು

ನಾಗೇಶ್ ಜೆ. ನಾಯಕ ಅವರು ಪರಿಚಯಿಸಿರುವ ಸ್ನೇಹಲತಾ ಗೌನಳ್ಳಿಯವರ 'ಉರಿವ ಚಂದಿರ' ಗಜಲ್ ಸಂಕಲನ.

ಬಿಡುವಿಲ್ಲದ ಮನದ ಗೊಂದಲಗಳಿಗೆ

ವಿರಾಮ ನೀಡಲು ನೀನೊಮ್ಮೆ ಬಾ ಸಾಕಿ

ನಾ ಬದುಕಬೇಕಿದೆ ಅವಮಾನಗಳಿಗೆ

ಕಫನ್ ತೊಡಿಸಲು ನೀನೊಮ್ಮೆ ಬಾ ಸಾಕಿ

          ಅದಮ್ಯ ಬದುಕ ಪ್ರೀತಿಗೆ ಆಸರೆಯನ್ನು ಬಯಸುವ ಸ್ನೇಹಲತಾ ಗೌನಳ್ಳಿ ಅವರ ಗಜಲ್ ಒಂದರ ಈ ಮೇಲಿನ ಸಾಲುಗಳು ಓದುಗರನ್ನು ಹಿಡಿದಿಟ್ಟುಕೊಳ್ಳುತ್ತವೆ. ಬೇರೆ ಬೇರೆ ಭಾಷೆಗಳಿಂದ ಹರಿದು ಬಂದ ಗಜಲ್ ಸಾಹಿತ್ಯ ಪ್ರಕಾರವನ್ನು ಕನ್ನಡದಲ್ಲಿ ಸಶಕ್ತವಾಗಿ ಪಸರಿಸಿದವರೆಂದರೆ ಶಾಂತರಸರು. ಅವರು ನೆಟ್ಟ ಗಜಲ್‍ನ ಆಲದ ಮರದಡಿಯಡಿಯ ತಣ್ಣೆಳಲಿನಲ್ಲಿ ಇಂದು ಎಷ್ಟೋ ಬರಹಗಾರರು ವಿಶ್ರಮಿಸುತ್ತಿದ್ದಾರೆ. ಅಂತಹ ಗಜಲ್ ರಚನೆಕಾರರಲ್ಲಿ ಸ್ನೇಹಲತಾ ಗೌನಳ್ಳಿ ಅವರೂ ಒಬ್ಬರು. ‘ಉರಿವ ಚಂದಿರ’ ಅವರ ಚೊಚ್ಚಲ ಗಜಲ್ ಸಂಕಲನ. ಇದು ಕನ್ನಡ ಪುಸ್ತಕ ಪ್ರಾಧಿಕಾರದಿಂದ ಮನ್ನಣೆ ಪಡೆದ ಕೃತಿಯಾಗಿದ್ದು, ಎರಡು ಬಾರಿ ಮುದ್ರಣಗೊಂಡಿದ್ದು ಹೆಮ್ಮೆಯ ಸಂಗತಿ. 61 ಗಜಲ್‍ಗಳನ್ನು ಒಳಗೊಂಡಿರುವ ಉರಿವ ಚಂದಿರನ ಗರ್ಭದಲ್ಲಿ ಬದುಕಿನ ಪ್ರಮುಖ ಭಾಗವಾದ ಪ್ರೇಮ, ಪ್ರಣಯ, ವಿರಹ ವೇದನೆಗಳ ಭರಪೂರ ಭಾವಗಳು ಕಾಣಸಿಗುತ್ತವೆ. ಅಷ್ಟೇ ಅಲ್ಲದೆ ಪ್ರಸ್ತುತ ಪ್ರಚಲಿತ ಸಮಸ್ಯೆಗಳು, ಮನುಷ್ಯ ಪ್ರೀತಿಯ ಹಂಬಲಗಳು, ಧರ್ಮ-ದೇವರ ನಡುವಿನ ಮುಖಾಮುಖಿ ಹೀಗೆ ವಿಭಿನ್ನ ವಿಷಯಗಳ ಗಜಲ್‍ಗಳನ್ನು ಆಸ್ವಾದಿಸಬಹುದು. ಹಿಂದಿ, ಉರ್ದು ಗಜಲ್ ಸಂಗೀತ ಕೇಳುತ್ತಲೆ ಕನ್ನಡ ಗಜಲ್ ಕಡೆಗೆ ಆಸಕ್ತಿ ಬೆಳೆಸಿಕೊಂಡ ಕವಯಿತ್ರಿ ಸ್ನೇಹಲತಾ ಅವರ ಎಲ್ಲ ಗಜûಲ್‍ಗಳಲ್ಲೂ ಇಂದು ಕಣ್ಮರೆಯಾಗುತ್ತಿರುವ ಮನುಷ್ಯ ಪ್ರೇಮವೇ ನುಸುಳಿ ಆದ್ರ೯ಗೊಳಿಸುತ್ತದೆ.

         ಸ್ನೇಹಾ ಅವರ ಸ್ವರಚಿತ ಗಜಲ್‍ಗಳ ಕನ್ನಡ ರೂಪಗಳನ್ನು ಗಮನಿಸುತ್ತಿದ್ದರೆ ಇವು ಉದಯೋನ್ಮುಖ ಪ್ರತಿಭೆಯ ‘ಒಳ್ಳೆಯ ಪ್ರಯತ್ನ’ ಗಳೆಂದು ನಮಗೆ ಮನದಟ್ಟಾಗದೆ ಇರದು ಎಂದೆನ್ನುವ ಆರೀಫ್ ರಾಜಾ ಗಜಲ್ ಅಮಲು ಏರಿಸಿಕೊಂಡಿರುವ ಅವರ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಸ್ನೇಹಲತಾ ತುಂಬ ಸೂಕ್ಷ್ಮ ಮನಸ್ಸಿನ ಕಾವ್ಯಪ್ರತಿಭೆ. ಈಕೆಯ ಗಜಲ್ ಸಾಲುಗಳಲ್ಲಿ ಮೊಹಬ್ಬತ್‍ನಿಂದ ಹಿಡಿದು ಆಜಾದ್‍ವರೆಗೂ ಬದುಕು ಬೆತ್ತಲುಗೊಳಿಸಿ ಬಯಲಲ್ಲಿ ನಿಲ್ಲಿಸುವ ಅನೇಕ ಶೇರ್‍ಗಳು ಇಲ್ಲಿವೆ ಎಂದು ಅಲ್ಲಾಗಿರಿರಾಜ್ ಅಭಿಮಾನ ಮೂಡಿಸುತ್ತಾರೆ. ಕವಯಿತ್ರಿ ಹೈದ್ರಾಬಾದ್ ಕರ್ನಾಟಕದವರಾದ್ದರಿಂದ ಸಹಜವಾಗಿ ಪ್ರತಿ ಗಜಲ್‍ನ ಶೇರ್‍ಗಳಲ್ಲೂ ಉರ್ದು ಪದಗಳ ಛಾಯೆಯನ್ನು ಗುರುತಿಸಬಹುದು. ಇವು ಗಜಲ್‍ನ ಸೊಬಗನ್ನು ಹೆಚ್ಚಿಸಿದ್ದು, ಓದುಗರಿಗೆ ಖುಷಿ ನೀಡುತ್ತವೆ.

        ಇಂದಿನ ಧಾವಂತದ ಜಗತ್ತಿನಲ್ಲಿ ಧರ್ಮ-ದೇವರಿಗಿಂತ ಮನುಷ್ಯ ಕೆಟ್ಟು ಹೋಗಿದ್ದಾನೆ. ಒಡಕು ಮೂಡಿಸುವ, ಅನ್ಯೋನ್ಯತೆಯಲ್ಲಿ ಹುಳಿ ಹಿಂಡುವ ಅವನ ಪೂರ್ವಾಗ್ರಹದ ಮನಸ್ಸು ಏಕತೆಗೆ ಅಡ್ಡಿಯಾಗುತ್ತಿದೆ. ನಮ್ಮ ನಡುವಿನ ನಫರತ್(ದ್ವೇಷ) ಕೊನೆಗೊಳಿಸುವ ನಿಟ್ಟಿನಲ್ಲಿ ನಾವೆಲ್ಲ ಏನು ಮಾಡಬೇಕು ಎನ್ನುವುದನ್ನು ಸಂಕಲನದ 4 ನೇ ಗಜಲ್‍ನಲ್ಲಿ ಪ್ರಭಾವಶಾಲಿಯಾಗಿ ಪ್ರತಿಬಿಂಬಿಸುತ್ತಾರೆ.


ಹಿಂಸೆ ಎಬ್ಬಿಸುವ ಪಂಥಗಳನ್ನು ಕಟ್ಟಬೇಕೆ

ಹಸಿರು ಕೇಸರಿ ನೀಲಿಗಳ ಹೆಸರಿನಲ್ಲಿ

ಸಂತರ ಸಂದೇಶಗಳನ್ನು ಹರಡಿ

ನಫರತ್‍ನ್ನು ಕೊನೆಗೊಳಿಸಬೇಕು ಇಲ್ಲಿ

        ಹಮ್ಮು-ಬಿಮ್ಮುಗಳ ಮಧ್ಯೆ ನಮ್ಮ ಪ್ರೀತಿ ಗೋಣು ಚೆಲ್ಲುತ್ತಿರುವುದು ಸಹಜವಾಗಿದೆ. ಎದೆಯ ಎಡಭಾಗದಲ್ಲಿ ಹುಟ್ಟುವ ಪ್ರೀತಿ ಶಾಶ್ವತವಾಗಿ ಉಳಿಯಬೇಕೆಂದರೆ, ನಮ್ಮೆಲ್ಲ ಸಣ್ಣತನಗಳನ್ನು ಬಿಟ್ಟು ಅದಕ್ಕೆ ಶರಣಾಗಬೇಕಿದೆ. ಆಕರ್ಷಣೆಯನ್ನೇ ಪ್ರೀತಿ ಎಂದುಕೊಳ್ಳುವ ಇಂದಿನ ಯುವಕರಿಗೆ ಪ್ರೀತಿಯ ಪಾಠ ಹೇಳಿಕೊಡುವ ಈ ಗಜಲ್ ಪಡ್ಡೆ ಹುಡುಗರ ನಿದ್ದೆ ಕದಿಯುವಂತಿದೆ.

ಮೊಹಬ್ಬತ್ತಿನ ಹಾದಿಯಲ್ಲಿ ನೀ ಒಮ್ಮೆ

ಪಯಣಿಸಿ ನೋಡು

ದಿಲ್ ಜಿಗರಿನಿಂದ ಯಾರನ್ನಾದರೂ

ನೀ ಒಮ್ಮೆ ಪ್ರೀತಿಸಿ ನೋಡು

         ಪ್ರೀತಿಗೆ ಯಾರ ಹಂಗೂ ಇಲ್ಲ, ಹಂಗಿನಲ್ಲಿದ್ದ ಪ್ರೀತಿ ಪ್ರೀತಿಯೇ ಅಲ್ಲ. ಲೋಕದ ಹಂಗು, ನೀತಿ-ನಿಯಮದ ಹಂಗು, ಜಾತಿ-ಧರ್ಮದ ಹಂಗು, ಬಡವ-ಬಲ್ಲಿದನೆಂಬ ಹಂಗು ಹೀಗೆ ಎಲ್ಲ ಹಂಗುಗಳ ಹರಿದು ಗರಿ ಬಿಚ್ಚಿ ಹಾರಾಡುವ ಹಕ್ಕಿಯ ಹಾಗೆ ಸ್ವಚ್ಛಂದ ಪ್ರೀತಿ. ಬಿಗ್ಗ ಬಿಗಿ ನಿಯಮಗಳಲ್ಲಿ ಬಂಧಿಸಿಡಲು ಪ್ರಯತ್ನಿಸಿದಷ್ಟೂ ಬಿಡಿಸಿಕೊಳ್ಳಲು ಯತ್ನಿಸುತ್ತದೆ ಪ್ರೇಮ. ಹಾಗೆಂದೇ ಕವಯಿತ್ರಿ ಈ ಗಜಲ್ ಸಾಲುಗಳಲ್ಲಿ ಹೀಗೆ ಹೇಳುತ್ತಾರೆ.


ಪುಸ್ತಕ ಪ್ರತಿ ಪ್ರಕಾಶನದ ಆನ್ಲೈನ್ ಮಳಿಗೆಯಲ್ಲಿ ಲಭ್ಯ.

ಸ೦ಪಕ೯ : 8884268702

ಲಿ೦ಕ್: https://www.instamojo.com/scchannappa/eda1dc8a575d17f3567e5d9eb6390888/?ref=store

ಮಿಂಚಿಂಚೆ: pratiprakasana@gmail.com


ನನ್ನ ಪ್ರೇಮದ ಧ್ಯಾನಕೆ

ದೇವರು ಧರ್ಮದ ಹಂಗಿಲ್ಲ ಕೇಳು ಸಾಕಿ

ಗೆರೆ ಎಳೆದು ನಿಯಮಗಳಲ್ಲಿ

ನನ್ನ ಬಂಧಿಸಲು ಸಾಧ್ಯವಿಲ್ಲ ಕೇಳು ಸಾಕಿ

        ದುನಿಯಾ ಕೆರಳಿ ನಿಂತರೂ ಅರಳುತಿದೆ ಮೊಹಬ್ಬತ್, ದುಶ್ಮನ್ ರಕ್ತ ಸುರಿಸಿದರೂ ನಗುತಲಿದೆ ಮೊಹಬ್ಬತ್. ಶತ ಶತಮಾನಗಳಿಂದಲೂ ಪ್ರೀತಿ ಮುಗಿಸಲು ಏನೆಲ್ಲಾ ಕಸರತ್ತು ನಡೆದಿದ್ದರೂ ಎರಡು ನಿಷ್ಕಲ್ಮಶ ಮನಸುಗಳ ಮೂಲಕ ಉಸಿರಾಡುತಿದೆ ಮೊಹಬ್ಬತ್. ಪ್ರೀತಿಸಿದವರು ಕೊನೆಯಾಗಬಹುದು; ಆದರೆ ಪ್ರೀತಿ ಎಂದಿಗೂ ಶಾಶ್ವತ. ಅದಕ್ಕೆ ಜೀವಂತ ಸಾಕ್ಷಿ ಇಂದಿಗೂ ಮಿನುಗುತಿರುವ ತಾಜ್ ಮಹಲ್. ಹಾಗೆಂದೇ ಸ್ನೇಹಲತಾ ಜಗತ್ತಿನ ಯಾವುದೇ ಆತಂಕಕಾರಿ ಶಕ್ತಿಗಳು, ಅವರು ಹೊರಡಿಸುವ ಫತ್ವಾಗಳು ನಳನಳಿಸುವ ಪ್ರೀತಿಯನ್ನು ಮುಗಿಸುವ ಯತ್ನ ಮಾಡುತ್ತಿರುವುದರ ಕುರಿತು ಹೇಳುತ್ತಾರೆ. ಅಷ್ಟೇ ಅಲ್ಲದೆ ಮನುಷ್ಯನ ಮುಖವಾಡಗಳನ್ನು ಕಳಚುತ್ತಾರೆ.

ಮಾತು ಮಾತಿಗೆ ಮಝಬ್‍ನ ಹೆಸರಲ್ಲಿ

ಪ್ರೀತಿ ಕೊಲ್ಲುವರಿಲ್ಲಿ

ದೇವರನ್ನು ಧರ್ಮಗಳ ಕಂಬಕ್ಕೆ ಕಟ್ಟಿ

ರೀತಿ ಹೊರಡಿಸುವರಿಲ್ಲಿ

        ಗಜಲ್ ಮಾಂತ್ರಿಕ ಅಲ್ಲಾಗಿರಿರಾಜ್ ಬದುಕು-ಬರಹ ಕವಯಿತ್ರಿಯನ್ನು ಬಹುವಾಗಿ ಕಾಡಿದ್ದ ಪ್ರಭಾವವೇ ಅವರ ಕುರಿತಾಗಿ ಗಜಲ್ ಅರಳಿರುವುದು ಕಾರಣವಾಗಿದೆ. ಜೀವ ಪ್ರೀತಿಯ ಗಿರಿರಾಜನ ಗಜûಲ್‍ಗಳಲ್ಲಿನ ಸಾಲುಗಳು ಇಲ್ಲಿ ಕವಿತೆಯಾಗಿ ಕಾಡಿವೆ. ತುಂಬ ನಿರ್ಭಿಡೆಯಿಂದ ಬರೆಯುವ ಮಾನವೀಯ ಅಂತಃಕರಣದ ಕವಿಯೊಬ್ಬ ಹೀಗೆ ಇನ್ನೊಬ್ಬ ಕವಯಿತ್ರಿಯ ಭಾವಗಳಲ್ಲಿ ಸೆರೆಯಾಗುವುದು ಬದುಕಿನ ಸಾರ್ಥಕ್ಯದ ಸಂಗತಿ. ತೀವ್ರವಾಗಿ ಅಧ್ಯಯನ ಮಾಡಿದರ ಪರಿಣಾಮವೇ ಹುಟ್ಟಿರುವ ಈ ಸಾಲುಗಳನ್ನು ಗಮನಿಸಿ.

ಮನುಷ್ಯ ಪ್ರೀತಿ ಹಂಚಲೊಲ್ಲದ ಮನಸ್ಸುಗಳು

ಜಾತಿ ಧರ್ಮಗಳ ಖೇಲ್ ಹೂಡುತ್ತವೆ

ನೀ ಯಾವಾಗಲೂ ನಗುವನ್ನೇ ಹಂಚೆಂದ

ಗಿರಿರಾಜನಿಗೆ ಸಲಾಂ

         ನನ್ನನ್ನು ಸಂಕಲನದಲ್ಲಿ ತುಂಬಾ ಕಾಡಿದ ಗಜಲ್ ಶಿವಶರಣೆ ಅಕ್ಕಮಹಾದೇವಿಯನ್ನು ರೂಪಕವಾಗಿಟ್ಟುಕೊಂಡು ಬರೆದ ಗಜಲ್. ಇದು ನಿನ್ನ ಕಾಲವಲ್ಲ ಅಕ್ಕ, ಒಬ್ಬಂಟಿ ಹೆಣ್ಣು ಹಾಯಾಗಿ ಹಾಡಿಕೊಂಡು ಓಡಾಡಿಕೊಂಡಿರಲು. ಎಲ್ಲೆಂದರಲ್ಲಿ ಹಸಿದ ನಾಯಿಗಳು ಬೀದಿಗಳಲ್ಲಿ ಕಾದುಕೊಂಡು ಕುಂತಿರುತ್ತವೆ. ಹೀಗೆ ಬಟ್ಟೆ ಇಲ್ಲದೆ ತಿರುಗಾಡುವುದು ಅಪಾಯಕಾರಿ, ಬಾ ಅಕ್ಕ ನಿನಗೆ ಬಟ್ಟೆ ತೊಡಿಸುವೆ ಎಂದು ಇಂದಿನ ಆತಂಕದ ಸನ್ನಿವೇಶವನ್ನು ತುಂಬ ಸಶಕ್ತವಾಗಿ ಕಟ್ಟಿಕೊಡುವ ಗಜಲ್ ಕಾಡುತ್ತದೆ, ಕಣ್ಣೀರಾಗಿಸುತ್ತದೆ.

ನಿನ್ನ ಬಿಚ್ಚು ಕೂದಲಿನ ಘಮಕ್ಕೆ ಅಮಲೇರಿದ ನಾಯಿಗಳು

ಬೀದಿಗೊಂದರಂತೆ ಕಾಯುತ್ತವೆ

ಅವರು ಕಾಮದ ವಾಮನರು ನೀ ಇಂದ್ರೀಯಗಳ ತೊರೆದ

ಇಂದ್ರಾಣಿಯಾಗಿರುವೆ ಬಾ ನಿನಗೆ ಮೊದಲು ಬಟ್ಟೆ ತೊಡಿಸುವೆ

          ಸ್ನೇಹಲತಾ ಗೌನಳ್ಳಿ ಗಜಲ್‍ನ್ನು ಧ್ಯಾನದಂತೆ ಆರಾಧಿಸಿದ್ದಾರೆ. ತಪದಂತೆ ಜಪಿಸಿದ್ದಾರೆ., ಜೀವದುಸಿರಿನಂತೆ ಆವಾಹಿಸಿಕೊಂಡಿದ್ದಾರೆ. ಹಾಗಾಗಿಯೇ ಅಪರೂಪದ ಗಜಲ್‍ಗಳು ಅವರಿಂದ ಕಾಡಿಸಿ ಬರೆಸಿಕೊಂಡಿವೆ. ಇಂತಹ ಅನನ್ಯ ಗಜಲ್ ಸಂಕಲನಗಳು ಮತ್ತಷ್ಟು ಅವರಿಂದ ಓದುಗರಿಗೆ ದೊರೆಯಲಿ ಎಂದು ಹಾರೈಸುತ್ತಾ ಅಭಿನಂದಿಸುವೆ.

-ನಾಗೇಶ್ ಜೆ. ನಾಯಕ


ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು