(ಕವಿ ಎ.ಎಸ್.ಮಕಾನದಾರರ ಹುಟ್ಟು ಹಬ್ಬದ ಸಂದಬ೯ದಲ್ಲಿ ಅವರ ಕಾವ್ಯದ ಕುರಿತು ನಮ್ಮ ಸ್ಪೂತಿ೯ ಮತ್ತು ಹಿರಿಯ ಕವಿ ಸತೀಸ ಕುಲಕಣಿ೯ ಅವರ ಮಾತುಗಳು)
ಪ್ರತಿರೋಧದ ಬಾಗಿಲಿಗೆ ಬಂದು ನಿಲ್ಲುವ :
ಮಕಾನದಾರ ಕಾವ್ಯ.
ನನ್ನ ಕಾವ್ಯದ
ಬೆನ್ನು ಹುರಿ
ಪಲ್ಲಕ್ಕಿಯಾಗುವುದಿಲ್ಲ
ಸ್ವಾಭಿಮಾನದ ಈ ಮೂರು ಸಾಲುಗಳು ಕವಿ ಎ.ಎಸ್.
ಮಕಾನದಾರರ ಕಾವ್ಯದ ಪ್ರಣಾಳಿಕೆ. ತುಂಬ ಹಂಬಲ್ ಜೀವಿಯಾಗಿರುವ ಮಕಾನದಾರ ಬಯಸುವುದು ಸ್ವಸ್ಥ ಸಮಾಜವೇ ಹೊರತು ಗುಲಾಮಿ
ಸಮಾಜವಲ್ಲ. ಇಂತಹ ಹಸನ ಸಮಾಜಕ್ಕೆ ಬೆಳಕೇ ಕನಕ, ಶರೀಫ,
ಬುದ್ಧರು. ಎಂತಹ ಸಂದರ್ಭದಲ್ಲಿಯೂ ಅಸಮಾನತೆ ಮತ್ತು
ಅಸಹನೆಯನ್ನು ನಯವಾಗಿ ತಿರಸ್ಕರಿಸುವ ಗುಣವುಳ್ಳ ಕಾವ್ಯ ಬರೆದವರು.
ನಮ್ಮ ಸಾಹಿತ್ಯ, ಇತಿಹಾಸ ಪರಂಪರೆಗಳ ಚಿಂತನೆಗಳೆಲ್ಲ ಕೊಳ್ಳ್ ಹರಿದು ನಿಂತ ಕೊರೋನಾ ದಿನಗಳಲ್ಲಿ,
ಅವುಗಳ ಆಳದಲ್ಲಿ ಮುಲುಕುತ್ತಿರುವ ನೋವು, ಹತಾಶೆ ಸುಳ್ಳು ಭರವಸೆಯ, ಅತಂತ್ರ ವಲಸೆಗರ ಬದುಕು ನೋಡಿದಾಗ ಮನಕಲುಕುವ
ಸಂದರ್ಭವಿದು. ಇದನ್ನೆಲ್ಲ ಹೊರಹಾಕಲು ನಮ್ಮಂತವರಿಗೆ ಕಾವ್ಯ ಬಿಟ್ಟರೆ ಅನ್ಯ ದಾರಿಗಳಿಲ್ಲ.

ನಿಜ ಸಂವೇದನಾಶೀಲ ಕವಿ ಮರುಗುತ್ತಲೆ,
ಇಂಥ ಅಕಾಲ ದಿನಗಳಿಗೆ ದನಿ ಕೊಡುವ ಕೆಲಸ ಮಾಡಬೇಕು.
ಹಲವರು ಮಾಡುತ್ತಲೂ ಇದ್ದಾರೆ. ವಿಶೇಷವಾಗಿ ಹೊಸ ಪೀಳಿಗೆಯ ಕವಿಗಳು ಸತ್ಯವನ್ನು ಬಿಚ್ಚಿಟ್ಟು ಬಹಳ
ಹೃದ್ಯಭಾವಗಳಲ್ಲಿ ಕಾವ್ಯ ರಚಿಸುತ್ತಿದ್ದಾರೆ.
ಕವಿ ಎ.ಎಸ್. ಮಕಾನದಾರರ ಕಾವ್ಯ ಕೂಡ ಸಮಾಜ ಪರ ಚಿಂತನೆಗಳ ದಾರಿ ಬಿಟ್ಟು, ಆಚೀಚೆ ಹೋಗದೆ ಮನುಷ್ಯ ಪ್ರೀತಿಯ ಕಾವ್ಯವಾಗಿ ಅರಳುತ್ತಿದೆ.
ಯಾವ ವಿಶ್ವವಿದ್ಯಾಲಯದ, ಪಾಠ-ಪುರಾಣಗಳ ಸಿದ್ದಾಂತ ಶಿಖಾಮಣಿಯಾಗದೆ ಮಕಾನದಾರರು ಫುಟ್‍ಪಾತ್ ಮತ್ತು ಮಸೀದಿ
ಹಾದಿಗಳಲ್ಲಿ ಬೆರೆತು ಕಲಿತು ಬರೆಯುತ್ತಿರುವವರು. ಪ್ರತಿ ಕವಿತೆ ಅಕ್ಕಡಿ ಸಾಲಿನಂತೆ ಬಹುತ್ವದ
ನಡುವೆ ಬದುಕುತ್ತ ನೆಲದ ತೇವ ಜೀವ ಕಾಯ್ದುಕೊಂಡಿದೆ.
ಅವರ ಪ್ರತಿ ಕವಿತಯಿಂದ ಕವಿತೆಗೆ ಸಾಗಿದಾಗ,
ನಮ್ಮ ಉಸಿರ ಹತ್ತಿರಕ್ಕೆ ಇರುವ ಹೆಸರಿಲ್ಲದ ಜೀವಿಗಳು ಇಲ್ಲಿ ಉಸಿರಾಡುತ್ತಾರೆ. ಕೆಳಗಿನ ಮನೆ
ಮಾಬವ್ವ, ಗಲ್ಲಿಗಳ ಸುತ್ತುವ ದರವೇಶಿ ಹಕೀಮರು,
ಸ್ವತಃ ಕವಿಯ ಅಪ್ಪ, ಅಮ್ಮ ಇಲ್ಲಿದ್ದಾರೆ. ಇವರೆಲ್ಲರನ್ನು ಕಾಯುವ ಬೆಳಕು ಬುದ್ಧ, ಕನಕ, ಶರೀಫರದು.

ನಾನು ಯೋಧನಲ್ಲ ಶಸ್ತ್ರಗಳ ಮಾಡಿಕೊಡುವ
ಕುಲುಮಿಯ ಕೂಲಿಕಾರ - ಎಂದು ಅಪರೂಪದ ಕವಿ ಸು. ರಂ. ಎಕ್ಕುಂಡಿ ಅವರು ಹೇಳಿದ ಮಾತು ನಮ್ಮ ಮಕಾನದಾರರ ಕವಿತೆಗಳಲ್ಲಿ ಧಾರೆ ಪಡೆದಂತಿವೆ. ಅಸಹಾಯಕ, ಗಂಟಲು ಕಟ್ಟಿ, ಮಾತನಾಡಲಾಗದ ಜೀವಿಗಳ ರೋಧನಗಳು ಇಲ್ಲಿವೆ. ಜೊತೆಗೆ
ಬದಲಾವಣೆಗಳಿಲ್ಲದೆ ಇಲ್ಲಿಯ ಬದುಕು ಹಸನವಾಗದು ಎಂಬ ಅರಿವು ಕೂಡ. ಸಿದ್ಧಾಂತಗಳ ನೆಲೆಯಲ್ಲಿಯೆ
ಪರಿವರ್ತನೆ ಬಯಸುವ ಯಾವ ಅಹಮ್ಮಿಲ್ಲದ ಅಂತಃಕರಣದ ಕಾವ್ಯ ಬರೆದವರು ಮಕಾನದಾರರು.
ನಮ್ಮ ಸಾಂಸ್ಕೃತಿಕ ಲೋಕದಲ್ಲಿ ಜೀವ
ಅಂಟಿಸಿಕೊಂಡು ಪ್ರತಿ ಸಂದರ್ಭಕ್ಕೂ ಪ್ರತಿಸ್ಪಂದನೆ ನೀಡುವ ನಿರ್ಮೋಹಿ ಲೇಖಕರು ಬಹಳ ಕಮ್ಮಿ. ಏನೋ
ಸಾಧಿಸಬೇಕು. ಸಿಗುವ ಪ್ರತಿ ಅವಕಾಶವೂ ಮೇಲಕ್ಕೇರುವ ಕಾಲ್ಕೆಳಗಿನ ಮೆಟ್ಟಲಾಗಬೇಕೆಂಬ ಹುನ್ನಾರಿನ
ಸಾಹಿತಿಗಳ ನಡುವೆ ಯಾವ ದೂರ್ತ ಭಾವಗಳಿಲ್ಲದೆ ತಳಕಿದ್ದವರನ್ನು ಮೇಲಕೆತ್ತಿ ಹಿಡಿಯುವ ಗುಣವುಳ್ಳ
ಅಪರೂಪದ ಕವಿ. ತನ್ನೊಂದಿಗೆ ಇತರ ಹೊಸ ಪ್ರತಿಭೆಗಳನ್ನು ಬೆಳೆಸುತ್ತಲೇ ಅಕ್ಕಡಿ ಸಾಲಿನಂತೆ
ಸಹಬಾಳ್ವೆ ಮಾಡುವ ಲೇಖಕರು.
ನಮ್ಮ ಸಾಹಿತ್ಯ ಮತ್ತು ಇನ್ನಿತರ ಲಲಿತ
ಕಲೆಗಳೆಲ್ಲ ಕೂಡ ಕೃಷಿ ಇದ್ದಂತೆ. ಹರಗುತ್ತ ಬಿತ್ತುತ್ತ, ಆಗಾಗ ಜವಳು ಹತ್ತದಂತೆ ಕಳೆ ತೆಗೆದು ನೆಲ ಹಸನ ಮಾಡುತ್ತಲೆ, ಮೂಕ ಪ್ರಾಣಿ ಪಕ್ಷಿಗಳ ಜೊತೆಗೆ
ಮಣ್ಣಿನೊಂದಿಗೆ ಬದುಕುವ ಒಕ್ಕಲು ವಿಧಾನ ನಮ್ಮ ಸಾಹಿತ್ಯ ಕೃಷಿಯಾಗಬೇಕು.
ಅಕ್ಕಡಿ ಸಾಲು, ಕವಿ ಎ.ಎಸ್. ಮಕಾನದಾರ್‍ರ ಈ ವರೆಗಿನ ಸಮಗ್ರ ಕಾವ್ಯ ಸಂಪುಟ. ಇವು
ಬರಿಕವಿತೆಗಳಲ್ಲ ಕವಿಯ ಜೀವ ಸಿದ್ಧಾಂತಗಳ ಚಿಂತನೆಗಳೂ ಆಗಿವೆ. ಇಲ್ಲಿಯ ಯಾವ ಕವಿತೆಯನ್ನು
ತೆಗೆದುಕೊಂಡರೂ ಅಸಹನೀಯ ಬದುಕಿನ ಚಿತ್ರವನ್ನು ಕೊಡುತ್ತ ಪ್ರತಿಭಟನೆಯ ಬಾಗಿಲಿಗೆ ತಂದು
ನಿಲ್ಲಿಸುವ ಸಂವೇದನೆಯವು.
ಮೂರುಘಟ್ಟಗಳಲ್ಲಿ ಇವರ ಕಾವ್ಯ ಕಾಲಕಾಲಕ್ಕೆ ವಸ್ತು
ವಿನ್ಯಾಸದಲ್ಲಿ ತಿರುವು ಪಡೆದಿವೆ. ಆರಂಭದಲ್ಲಿ ತುಂಬ ವಿನೀತ ಭಾವದ ಕವಿತೆಗಳು ಕಂಡರೆ ಮತ್ತೊಂದು ಹಂತದಲ್ಲಿ
ತಮ್ಮೆಲ್ಲ ಅನುಭವ ವಿಚಾರಗಳನ್ನು ವಿಸ್ಕೃತವಾಗಿ ಬರೆಯುತ್ತಾರೆ. ಮೂರನೆಯ ಘಟ್ಟದಲ್ಲಿ ತುಂ
ಸ್ಪುಟವಾಗಿ ಸಣ್ಣ ಸಣ್ಣ ಚಿತ್ರ್ಯೋಕ್ತಿಯಲ್ಲಿಯೆ ಮನ ಮುಟ್ಟುವಂತೆ ಹೇಳುತ್ತಾರೆ.
ಚಿಂತನೆಗೆ ಹಚ್ಚುವುದೆ ಇಂದಿನ ಕಾವ್ಯದ
ಪ್ರಧಾನ ಗುಣವಾಗಿದೆ. ಇದೇ ಭೂಮಿಕೆಯಲ್ಲಿ ಅಕ್ಕಡಿ ಸಾಲಿನ ಕವಿತೆಗಳು ರಚಿತವಾಗಿವೆ. ತಾನು ಚಿಂತಿಸುತ್ತ
ಪರೋಕ್ಷವಾಗಿ ನಮ್ಮಲ್ಲಿಯೂ ಅಂತಹ ಭಾವಗಳು ಬೆಳೆಸುವ
ಕವಿತೆಗಳಿವು. ಮೌನಕ್ಕೂ ಒಂದು ಶಕ್ತಿಯಿದೆ. ಅಂತಹ ಮೌನ ಇಲ್ಲಿನ ಕವಿತೆಗಳುದ್ದಕ್ಕೂ
ಆವರಿಸಿದೆ. ಜೀವ ಪ್ರೀತಿಯ ಗಾಂಧೀ ವಾದಿಯಂತೆ ಕವಿ ಎ.ಎಸ್. ಮಕಾನದಾರ ಕಾಣುತ್ತಾರೆ.
ಯಾಕೆ ಜಾರಿಕೊಳ್ಳುವೆ ಕವಿತೆ, ಮಲಹೊರುವ ಕರಿಯನ ಕಣ್ಣೀರು ಒರೆಸದಂತೆ- ಎಂದು ತನ್ನ ಕಾವ್ಯವನ್ನು ತಾನೆ
ಪ್ರಶ್ನಿಸುವ ಸ್ವವಿಮಶೆ೯ಯ ಬಂಡಾಯಗಾರ.
ಬಡವರ ಅಸ್ಥಿಪಂಜರವನ್ನೇ
ಏಣಿಯಾಗಿ ಎಲುಬಿಂದ ಎಲುಬಿಗೆ
ದಿಟ್ಟ ಹೆಜ್ಜೆಯಿಟ್ಟ ಶ್ರೀಮಂತರು
ಉನ್ನತ ಮಟ್ಟಕ್ಕೇರಿದರಲ್ಲವೇ ?
ಇದ್ದವರು ಮತ್ತು ಇಲ್ಲದವರ ಅಂತರ ಅರಿತಿರುವÀ
ಕವಿ ಇಂಥ ತಾರತಮ್ಯಕ್ಕೆ ಪ್ರತಿರೋಧದ ದನಿ
ಎತ್ತುತ್ತಾರೆ. ಸುಟ್ಟ ಕನಸಿಗೆ ವಿಮೆ
ತುಂಬುವವರಾರು ? ಎಂದು ಯಾರವರು ಕವಿತೆಯಲ್ಲಿ ಕೇಳುತ್ತಾರೆ.
ಹಸಿದ ಹೊಟ್ಟೆಯ
ಬೆಂಕಿ ನಂದಿಸುವ
ಅಗ್ನಿಶಾಮಕ ದಳ
ಬರಬೇಕು ಎಲ್ಲಿಂದ
ಬೆಂಕಿ ಕುಲುಮೆಯಾಗಿರುವ ಹಸಿದ ಹೊಟ್ಟೆಗೆ
ಪರ್ಯಾಯ ಹುಡುಕುವ ದಾರಿ ಬರಬೇಕು ಎಲ್ಲಿಂದ ಅನ್ನುತ್ತಲೇ, ಬರಲಿ ಎಂಬ ಒತ್ತಾಯವಿದೆ. ಕೊರೋನಾ ಕಾಲದಲ್ಲಿ ಬರೆದ ಕವಿತೆಗಳಲ್ಲ ಇವು. ಆದರೆ
ಮಹಾನಗರಗಳು ಖಾಲಿಯಾಗಿ ಬಡವರನ್ನು ಹೊರದಬ್ಬುತ್ತಿರುವ ಕಾಲದಲ್ಲಿ ಈ ಸಾಲುಗಳು
ಅರ್ಥಪೂರ್ಣವೆನಿಸುತ್ತವೆ. ಹಸಿದ ಹೊಟ್ಟೆಯಲ್ಲಿ ಮಕ್ಕಳು ಮರಿಗಳನ್ನು ಕಟ್ಟಿಕೊಂಡು ನೂರಾರು ಮೈಲು
ಅನ್ನದ ಮನೆಯನ್ನು ಬಿಟ್ಟುಮ ಖಾಲಿ ಗೂಡಿಗೆ ಮರಳಿ ಬರುತ್ತಿರುವ ವಲಸಿಗರನ್ನು ನೋಡಿದಾಗ ಹಸಿವು
ಬೆಂಕಿಯನ್ನು ಆರಿಸುವ ಅಗ್ನಿಶಾಮಕದಳ ನೆನಪಾಗದೇ ಇರುವುದಿಲ್ಲ.
ಒಟ್ಟು 154 ಕವಿತೆಗಳ ಜೊತೆಗೆ 63 ಪುಡಿ ಪದ್ಯಗಳಿವೆ. ಏಕೋಭಾವದಿಂದ
ಹೇಳಿದ್ದಕ್ಕಿಂತ, ಹೇಳುವುದಿನ್ನೂ ಬಾಕಿ ಇದೆ ಎಂದು ಅನ್ನಿಸದೆ
ಇರಲಾರದು. ಎಲ್ಲಿಯೂ ಸಿಡಿದೇಳದೆ ಸಮಾಧಾನಿಯಾಗಿರಬೇಕು ಎಂಬ ಅಕ್ಕನ ತತ್ವ ಪರಿಪಾಲನೆಯ ರೀತಿಯವು.
ಮಕಾನದಾರ್ ಕಾವ್ಯ ಸಮಾಜವನ್ನು
ಪ್ರಶ್ನಿಸುವುದರ ಜೊತೆಗೆ ತನ್ನನ್ನೂ ಪ್ರಶ್ನಿಸಿಕೊಳ್ಳುವ ಪರಿ ನನಗೆ ಮಚ್ಚುಗೆಯಾಯಿತು.
ಎಲ್ಲರನ್ನೂ ಎದುರಿಸಬಹುದು ಆದರೆ ನಮ್ಮ ಅತಃಸಾಕ್ಷಿಯನ್ನು ಎದುರಿಸುವುದು ತುಂಬ ಕಠಿಣ.
1
ಮನೆ ತುಂಬ ಬೆಳಕಿಂಡಿ
ಕಿಟಕಿ ಬಾಗಿಲು
ಬೆಳಕಿಗಾಗಿ ಕಾತರಿಸುವುದು
ನಿಂತಿಲ್ಲ
2
ಬಾಗಿಲೊಳಗೆ ಅವಳು
ಬಾಗಿಲ ಹೊರಗೆ ಬುದ್ಧ
...
ಯಾರ ಕರೆಗೆ
ಕಿವಿಗೊಡಲಿ
3
ನನ್ನ ಉಸಿರಿಗೆ ಕವಿತೆ ಬೇತಾಳ
ಕವಿತೆಯ ಉಸಿರಿಗೆ, ಕವಿ ಬೆನ್ನು ಬಿಡದ ಬೇತಾಳ
4
ಮುಳ್ಳು ಬೇಲಿಯ ಮೇಲೆ
ವಿರಮಿಸದಂತಾಗಿದೆ ಹೃದಯ
ಇವಿಷ್ಟು ಸಾಲುಗಳು ಸಾಕು, ನಮ್ಮೆದೆಯ ಅಕ್ಕಡಿಯ ಸಾಲುಗಳಲ್ಲಿ ಅಕ್ಕಡಿಯ ಕಾಲುಗಳಾಗಿ ಬಿತ್ತಿಕೊಳ್ಳಲು.
ಪ್ರಶ್ನಿಸುವ ಪರಿತಪಿಸುವ ಮರು ಆಲೋಚನೆಗೆ ಹಚ್ಚುವ ಕವಿತೆಗಳಿವು. ಕೈಕೊಟ್ಟ ಮುಂಗಾರು, ಕಾಲತೊಡಕಿನ ಬಳ್ಳಿ ನನ್ನ ಕಾವ್ಯ ಎಂದು ನೋವಿನಿಂದ ನುಡಿಯುವ ಕವಿ ಎ.ಎಸ್.
ಮಕಾಂದಾರ್‍ರ ಕಾವ್ಯ ಹೊಸ ತಿರುವಿಗೆ ಬಂದು
ನಿಂತಿದೆ.
- ಸತೀಶ ಕುಲಕರ್ಣಿ
ಹಿರಿಯ ಸಾಹಿತಿಗಳು, ಹಾವೇರಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ